Syamantaka Story - Kannada – Rosebazaar India

Watch us on Shark Tank!

Syamantaka Story - Kannada

Ganesh Chaturthi, Vinayaka Chaturthi, Ganesha, Ganesh stories, Syamanthaka

ದ್ವಾಪರಯುಗದಲ್ಲಿ ಯದುಕುಲದಲ್ಲಿ ಜನಿಸಿದ ಪರಮಾತ್ಮನ ಅವತಾರವಾದ ಶ್ರೀಕೃಷ್ಣನೂ ಕೂಡಾ ಈ ಅಪವಾದದಿಂದ ಹೊರತಾಗಿಲ್ಲ. ಯದುಕುಲದಲ್ಲಿ ಸತ್ರಾಜಿತನೆಂಬ ರಾಜರ್ಷಿಯ ತಪಸ್ಸಿಗೆ ಮೆಚ್ಚಿ ಸೂರ್ಯದೇವನು ಶ್ಯಮಂತಕ ಹೆಸರಿನ ಮಣಿರತ್ನವನ್ನು ವರ ರೂಪದಲ್ಲಿ ದಯಪಾಲಿಸಿದ್ದನು. ಈ ಮಣಿಯು ರಾಜರ್ಷಿಯರಿಗೆ ನಿತ್ಯ ಹೊನ್ನರಾಶಿಯನ್ನು ಕೊಡುತ್ತಿತ್ತು. 

ಈ ವಿಷಯವು ದ್ವಾರಕೆಯ ನಿವಾಸಿಗಳ ಮೂಲಕ ಶ್ರೀ ಕೃಷ್ಣನಿಗೆ ತಲುಪಿ, ಸತ್ರಾಜಿತನನ್ನು ಆಸ್ಥಾನಕ್ಕೆ ಕರೆಸಿಕೊಂಡು ಸಾಮಾನ್ಯ ಪ್ರಜೆಗಳ ಬಳಿ ಅಮೂಲ್ಯರತ್ನವಿದ್ದರೆ ಅವರ ಜೀವಕ್ಕೆ ಅಪಾಯವೆಂದೂ, ಪ್ರಜೆಗಳ ಕಲ್ಯಾಣಕ್ಕಾಗಿ ಮಣಿಯನ್ನು ರಾಜಕೋಶಕ್ಕೊಪ್ಪಿಸುವಂತೆ ವಿನಂತಿಸಿಕೊಂಡನು. ಸತ್ರಾಜಿತನು ಶ್ರೀ ಕೃಷ್ಣನ ಮಾತನ್ನು ತಿರಸ್ಕರಿಸಿ ನನ್ನ ತಪಸ್ಸಿಗೆ ವರದಾನವಾಗಿ ಲಭಿಸಿದ್ದನ್ನು ನಾನು ಕೊಡಲಾರೆನೆಂದನು.

ಈ ಮಾತು ಕೇಳಿದ ಶ್ರೀ ಕೃಷ್ಣನು ಮರುಮಾತನಾಡದೇ ಸತ್ರಾಜಿತನನ್ನು ಕಳಿಸಿಕೊಟ್ಟನು. ಈ ವಿಷಯ ದ್ವಾರಕೆಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿತು. ಈ ಘಟನೆಯ ನಂತರ ಯಾರಾದರೂ ಅಪಹರಿಸಬಹುದೆಂದು ಸತ್ರಾಜಿತನು ಮಣಿಯನ್ನು ಕಂಠದಲ್ಲಿ ಧಾರಣ ಮಾಡಿಸಿ ಹಾಕಿಕೊಂಡು ಓಡಾಡಿಕೊಂಡಿದ್ದನು. ಸ್ವಲ್ಪ ದಿನ ಬಳಿಕ ಗಣೇಶ ಚತುರ್ಥಿಯ ದಿನವೇ ಶ್ರೀಕೃಷ್ಣನಿಗೆ ನೀರಿನಲ್ಲಿ ಚಂದ್ರನ ಪ್ರತಿಬಿಂಬದ ದರ್ಶನವಾಯಿತು. ಸರ್ವಾಂತರ್ಯಾಮಿಯಾದ ಭಗವಂತನಿಗೆ ತಿಳಿಯದ್ದೇನಿದೆ. ಚೌತಿ ಚಂದ್ರ ದರ್ಶನದ ದೋಷದ ಬಗ್ಗೆ ಮನಸ್ಸಿನಲ್ಲಿ ಅಳುಕಿತ್ತು.

ಕೆಲ ಕಾಲದ ನಂತರ ಎಂದಿನಂತೆ ಸತ್ರಾಜಿತನು ಬೇಟೆಗಾಗಿ ಕಾಡಿಗೆ ತೆರಳಿದಾಗ ಈತನ ಕಂಠದಲ್ಲಿರುವ ಮಣಿರತ್ನಕ್ಕೆ ಆಸೆ ಪಟ್ಟು ಒಂದು ಸಿಂಹವು ಇವನನ್ನು ಕೊಂದು ಮಣಿಯನ್ನು ಅಪಹರಿಸಿತು ಮತ್ತು ತಾನು ಕಂಠದಲ್ಲಿ ಧರಿಸಿತು. ಈ ಸಿಂಹದ ಕೊರಳಲ್ಲಿರುವ ಮಣಿಯನ್ನು ಜಾಂಬವಂತನು (ತ್ರೇತಾಯುಗದ ರಾಮವತಾರದಲ್ಲಿ ಬರುವ ಜಾಂಬವಂತ)ಸಿಂಹದೊಡನೆ ಕಾದಾಡಿ ಕೊಂದು ಮಣಿಯನ್ನು ತನ್ನದಾಗಿಸಿಕೊಂಡು, ತನ್ನ ಮಗಳಿಗೆ ಉಪಹಾರ ರೂಪದಲ್ಲಿ ನೀಡಿದನು. ಅದು ಅವಳ ಕಂಠವನ್ನಲಂಕರಿಸಿತು. ಈ ಎಲ್ಲಾ ವಿದ್ಯಮಾನಗಳು ದ್ವಾರಕೆವಾಸಿಗಳಿಗೆ ತಿಳಿದಿರಲಿಲ್ಲ. 

ಸತ್ರಾಜಿತನು ಬೇಟೆಗೆ ಹೋಗಿ ಮರಳದಿರುವುದನ್ನು ಕಂಡ ಜನತೆ ಶ್ರೀ ಕೃಷ್ಣನ ಮೇಲೆ ಸಂಶಯ ವ್ಯಕ್ತಪಡಿಸಿ ಶ್ಯಮಂತಕ ಮಣಿಗಾಗಿ ಹತ್ಯೆಗೈದಿರಬಹುದೆಂದು ಆಡಿಕೊಳ್ಳಹತ್ತಿದರು. ಈ ವಿಷಯವನ್ನು ಗುಪ್ತಚರರ ಮೂಲಕ ತಿಳಿದ ಶ್ರೀಕೃಷ್ಣ ಸತ್ರಾಜಿತನನ್ನು ಹುಡುಕುವದಕ್ಕಾಗಿ ಆತ ಹೋದ ಮಾರ್ಗವನ್ನನುಸರಿಸಿ ಆಪ್ತ ಸೈನಿಕರೊಂದಿಗೆ ಕಾಡಿಗೆ ತೆರಳಿದನು.  ಅನತಿ ದೂರದಲ್ಲಿ ಜೀರ್ಣಾವಸ್ತೆಯಲ್ಲಿದ್ದ ಶವವನ್ನು ಸತ್ರಾಜಿತನದೆಂದು ಗುರುತಿಸಿದರು. ಆದರೆ ಕಂಠದಲ್ಲಿ ಮಣಿ ಇಲ್ಲದ್ದನ್ನು ಕಂಡರು, ಶವದ ಮೇಲೆ ಸಿಂಹದ ಉಗುರಿನಿಂದಾದ ಗಾಯವನ್ನು ಗುರ್ತಿಸಿದರು. ಕಾದಾಡುವಾಗ ಮಣಿಯು ಎಲ್ಲಿಯಾದರೂ ಬಿದ್ದಿರಬಹುದೆಂದು ಸುತ್ತಲೆಲ್ಲ ಸೈನಿಕರೊಂದಿಗೆ ಹುಡುಕಾಡಿದಾಗ, ಸಿಂಹದ ಶವವೂ ಸಿಕ್ಕಿತು ಅದರ ದೇಹದಲ್ಲಿಯೂ ಕೂಡಾ  ಮಣಿ ಸಿಗಲಿಲ್ಲ. ಸಿಂಹದ ದೇಹದಲ್ಲಾದ ಕರಡಿಯ ಗುರುತನ್ನು ಗ್ರಹಿಸಿ ಕರಡಿಯೇ ಮಣಿಯನ್ನು ಅಪಹರಿಸಿರಬಹುದೆಂದು ಉಹಿಸಿದರು ಮತ್ತು ಕರಡಿಯ ಪಾದದ ಹೆಜ್ಜೆಯ ಗುರುತನ್ನನುಸರಿಸಿ ಹುಡುಕುತ್ತಾ ಸಾಗಿದರು. ಆ ಪಾದದ ಗುರುತುಗಳು ಗುಹೆಯ ಒಳತನಕ ಇದ್ದುದನ್ನು ಗಮನಿಸಿದರು.

ಶ್ರೀಕೃಷ್ಣನು ತನ್ನ ಸಹಚರರನ್ನೆಲ್ಲಾ ಗುಹೆಯ ದ್ವಾರದ ಬಳಿ ನಿಲ್ಲಿಸಿ, ತಾನೊಬ್ಬನೇ ಗುಹೆಯೊಳಗೆ ಕರಡಿಯನ್ನು ಹುಡುಕುತ್ತಾ ನಡೆದನು. ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಕನ್ಯೆಯ ಕೊರಳಲ್ಲಿ ಶ್ಯಮಂತಕ ಮಣಿಯು ರಾರಾಜಿಸುತ್ತಿರುವುದನ್ನು ಕಂಡನು. ಅವಳು ಜಾಂಬವಂತನ ಮಗಳು ಜಾಂಬವತಿಯಾಗಿದ್ದಳು. ಅವಳ ಬಳಿ ಬಂದು ಮಣಿರತ್ನವನ್ನು ತನಗೊಪ್ಪಿಸುವಂತೆ ಬೇಡಿಕೊಂಡನು. ಆ ಕನ್ಯೆಯೂ ಕೂಡಲೇ ತಂದೆಯನ್ನು ಕೂಗಿದಳು. ಯಾವುದೋ ನರಮಾನವನನ್ನು ಗುಹೆಯಲ್ಲಿ ಕಂಡು ಜಾಂಬವಂತನು ಕುಪಿತನಾದನು ಮತ್ತು ಕೃಷ್ಣನ ಮೇಲೆ ಆಕ್ರಮಣ ಮಾಡಿದನು. 

ಪ್ರತಿಯಾಗಿ ಕೃಷ್ಣನೂ ಸಹ ಯುದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘನಘೋರ ಯುದ್ಧವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯುದ್ಧ. ಜಾಂಬವಂತನು ರಾಮಭಕ್ತ , ಶ್ರೀಕೃಷ್ಣನು ಸಾಕ್ಷಾತ್ ಭಗವಂತ. ಆದರೆ ಶ್ರೀಕೃಷ್ಣನೂ ರಾಮನೇ, ಎಂದು ಮಾತ್ರ ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯುದ್ಧವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋಕ್ಷವನ್ನು ಪಡೆಯುತ್ತಾನೆ. ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರಿಂದೊಡಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವೃತ್ತಾಂತವನ್ನೆಲ್ಲಾ ಪ್ರಜೆಗಳಿಗೆ ತಿಳಿಸಿದನು. ತನ್ನ ಮೇಲೆ ಬಂದ ಕಳ್ಳತನದ ಆರೋಪದಿಂದ ಮುಕ್ತನಾದನು.

https://www.kannadaprabha.com/ganesha-chaturthi/2015/sep/14/the-story-of-the-syamantaka-gem-and-sri-krishna-258113.html

Leave a comment

Name .
.
Message .

Please note, comments must be approved before they are published