Ganesh Birth Story - Kannada

ಗಣಪತಿಗೆ ಜನ್ಮ ನೀಡಿದವಳು ಪಾರ್ವತಿ. ಈಶ್ವರನು ಇಲ್ಲದ ಸಮಯದಲ್ಲಿ ಶ್ರೀಗಂಧದ ಮುದ್ದೆಯಿಂದ ಆಕೆ ಗಣೇಶನನ್ನು ಸೃಷ್ಟಿಸಿ, ತಾನು ಸ್ನಾನಕ್ಕೆ ಹೋಗುತ್ತ ಬಾಗಿಲನ್ನು ಕಾಯುವಂತೆ ತಿಳಿಸಿ ಹೋದಳಂತೆ. ಆಕೆ ಸ್ನಾನಕ್ಕೆ ಹೋದಾಗ ಅಲ್ಲಿಗೆ ಬಂದ ಶಿವನಿಗೆ ಒಳಗೆ ಹೋಗಲು ಗಣಪತಿ ನಿರಾಕರಿಸಿದಾಗ, ಅವರಿಬ್ಬರಿಗೂ ಜಗಳವಾಯಿತಂತೆ. ಈ ಜಗಳದಲ್ಲಿ ಕೋಪಗೊಂಡ ಈಶ್ವರನು ರೌದ್ರಾವತಾರವನ್ನು ತಾಳಿ ಗಣಪತಿಯ ತಲೆಯನ್ನು ಕತ್ತರಿಸಿ ಹಾಕಿದನಂತೆ.
ಆಮೇಲೆ ಅಲ್ಲಿಗೆ ಆಗಮಿಸಿದ ಪಾರ್ವತಿ ದೇವಿಯು ಈ ದೃಶ್ಯವನ್ನು ಕಂಡು ಉಗ್ರಾವತಾರವನ್ನು ತಾಳಿದಳಂತೆ, ಆಗ ಆಕೆ ಕಾಳಿಯ ಅವತಾರವನ್ನು ತಾಳಿ ವಿಶ್ವವನ್ನು ನಾಶಪಡಿಸುವ ಬೆದರಿಕೆಯನ್ನು ಹಾಕಿದಳಂತೆ. ಇದು ಪ್ರತಿಯೊಬ್ಬರನ್ನು ಆತಂಕಕ್ಕೆ ತಳ್ಳಿತಂತೆ. ಆಗ ಎಲ್ಲರೂ ಕಾಳಿಕಾದೇವಿಯ ಕೋಪವನ್ನು ತಣಿಸುವ ಉಪಾಯವನ್ನು ಹುಡುಕುವಂತೆ ಈಶ್ವರನಿಗೆ ಮೊರೆ ಸಲ್ಲಿಸಿದರಂತೆ. ಆಗ ಶಿವನು ತನ್ನ ಅನುಯಾಯಿಗಳಿಗೆ ಹೀಗೆ ಹೇಳಿದನಂತೆ. ಎಲ್ಲಾ ಕಡೆ ಹುಡುಕಿ, ನಿಮ್ಮ ಕಣ್ಣಿಗೆ ಮೊದಲು ಕಾಣಿಸುವ, ಯಾವ ತಾಯಿ ಉದಾಸೀನವಾಗಿ ತನ್ನ ಮಗುವನ್ನು ಬೆನ್ನ ಹಿಂದೆ ಬಿಟ್ಟು ಬಿಟ್ಟು ಇರುತ್ತಾಳೆಯೋ, ಆ ಮಗುವಿನ ತಲೆಯನ್ನು ಕಡಿದು ತನ್ನಿ ಎಂದನಂತೆ.
ಹೀಗೆ ಶಿವನ ಅನುಯಾಯಿಗಳು ಹುಡುಕುವಾಗ ಅವರಿಗೆ ಮೊದಲು ಕಾಣಿಸಿದ್ದು ತಾಯಿಯ ಬೆನ್ನ ಹಿಂದೆ ತನ್ನ ಪಾಡಿಗೆ ತಾನಿದ್ದ ಆನೆ ಮರಿ. ಅವರು ಅದನ್ನೇ ಕಡಿದು ತಂದು ಶಿವನಿಗೆ ನೀಡಿದರು. ಇದನ್ನು ನೋಡಿ ಕಾಳಿಕಾ ದೇವಿಯ ಕೋಪವು ತಣ್ಣಗಾಯಿತು. ಪಾರ್ವತಿ ದೇವಿಯು ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಆಗ ಎಲ್ಲಾ ದೇವರುಗಳು ಗಣೇಶನನ್ನು ಆಶಿರ್ವದಿಸಿದರು. ಆ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲು ಆರಂಭಿಸಲಾಯಿತು.